ಭಕ್ತಿಸುಧೆ

ಬಲ್ಲವರೆ ಬಲ್ಲರು ಎಲ್ಲವರು ಅರಿಯರು

ಬಲ್ಲವರೆ ಬಲ್ಲರು ಎಲ್ಲವರು ಅರಿಯರು

ಪುಲ್ಲಲೋಚನ ಪರಬ್ರಹ್ಮನೆಂಬುದನು || ಪ ||

ಅಜಜ್ಞಾನಾಧಿಕ ಬಲ್ಲ ಅನಲಸ್ನೇಹಿತ ಬಲ್ಲ

ಗಜ ಚರ್ಮಾಂಬರ ಬಲ್ಲ ಗರುಡ ಬಲ್ಲ

ಭುಜಗೇಶ್ವರ ಬಲ್ಲ ಭೂರಿಲೋಚನ ಬಲ್ಲ

ತ್ರಿಜಗದಧಿಪತಿ ತ್ರಿವಿಕ್ರಮನೆಂಬುದನು || 1 ||

ಶುಕಯೋಗೀಶ್ವರ ಬಲ್ಲ ಸುಗುಣ ನಾರದ ಬಲ್ಲ

ಭಕುತ ಪ್ರಹ್ಲಾದ ಬಲ್ಲ ಬಲಿಯು ಬಲ್ಲ

ರುಕುಮಾಂಗದ ಬಲ್ಲ ಋಷಿ ಪರಾಶರ ಬಲ್ಲ

ಮಕರಕುಂಡಲಧರ ಪರಾತ್ಪರನೆಂಬುದನು || ೨ ||

ಅಂಬರೀಶನು ಬಲ್ಲ ಅತ್ರಿ ಋಷಿಯು ಬಲ್ಲ

ಸಂಭ್ರಮದಿ ಮನು ಬಲ್ಲ ಸಹದೇವ ಬಲ್ಲ

ಬೆಂಬಿಡದುದ್ಧವ ಬಲ್ಲ ಬೇಡಿದ ಧ್ರುವ ಬಲ್ಲ

ಕಂಬು ಚಕ್ರಧರ ಕರ್ಮಹರನೆಂಬುದನು ||೩ ||

ವಶಿಷ್ಠಮುನಿ ಬಲ್ಲ ವರ ವಿಭೀಷಣ ಬಲ್ಲ

ವಿಶಿಖಶಯನ ಬಲ್ಲ ವಿದುರ ಬಲ್ಲ

ಋಷಿ ವಾಲ್ಮೀಕಿ ಬಲ್ಲ ರಾಜ ವಿದೇಹ ಬಲ್ಲ

ಶಶಿಮಿತ್ರನೇತ್ರ ಸರ್ವೋತ್ತಮನೆಂಬುದನು || ೪ ||

ವಾಗಿನಿಂದಕ್ರೂರ ಬಲ್ಲ ವಚನಿ ಶೌನಕ ಬಲ್ಲ

ಯೋಗಿ ಕಪಿಲ ಬಲ್ಲ ಭೃಗು ಬಲ್ಲನು

ತ್ಯಾಗಿ ಧರ್ಮಜ ಬಲ್ಲ ರಣದೊಳರ್ಜುನ ಬಲ್ಲ

ಕಾಗಿನೆಲೆಯಾದಿಕೇಶವ ಕೈವಲ್ಯನೆಂಬುದನು || ೫ ||

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು

ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.